02 Sep 2026

ಮಹಾವಿದ್ಯಾಲಯದಲ್ಲಿ 2026-27 ನೇ ಸಾಲಿನ ವಿದ್ಯಾರ್ಥಿ ಒಕ್ಕೂಟ ಉದ್ಘಾಟನಾ ಸಮಾರಂಭ

ಇಳಕಲ್ಲ: ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಶ್ರೀ ವಿಜಯ ಮಹಾಂತೇಶ ಕಲೆ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯ, ಇಳಕಲ್ಲ ನಲ್ಲಿ ೨೦೨೬-೨೭ನೇ ಸಾಲಿನ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನಾ ಸಮಾರಂಭವು ಆಗಸ್ಟ್ ೨೫, ೨೦೨೬ರಂದು ಎಸ್. ಆರ್. ಕಂಠಿ ಸಭಾಂಗಣ, ಮಹಾಂತ ಗಂಗೋತ್ರಿಯಲ್ಲಿ ವಿಜೃಂಭಣೆಯಿAದ ಜರುಗಿತು.
ಕಾರ್ಯಕ್ರಮವು ಚಿತ್ತರಗಿ ಶ್ರೀ ವಿಜಯ ಮಹಾಂತೇಶ ಸಂಸ್ಥಾನಮಠ, ಇಳಕಲ್ಲನ ಪೂಜ್ಯ ಶ್ರೀ ಮ.ನಿ.ಪ್ರ. ಡಾ. ಗುರುಮಹಾಂತ ಸ್ವಾಮಿಗಳವರ ದಿವ್ಯ ಸಾನಿಧ್ಯ ಹಾಗೂ ಅಧ್ಯಕ್ಷತೆಯಲ್ಲಿ ನಡೆಯಿತು. ಬೆಂಗಳೂರಿನ ಹಿರಿಯ ಸಾಹಿತಿ ಡಾ. ವಿಜಯಶ್ರೀ ಸಬರದ ಅವರು ಸಮಾರಂಭವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆ, ಸೃಜನಶೀಲತೆ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಅವರು ಕರೆ ನೀಡಿದರು.
ಬೆಂಗಳೂರಿನ ಹಿರಿಯ ಸಾಹಿತಿ ಡಾ. ಬಸವರಾಜ ಸಬರದ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಇಂದಿನ ವಿದ್ಯಾರ್ಥಿಗಳು ಭವಿಷ್ಯದ ದೇಶದ ನಿರ್ಮಾತೃಗಳಾಗಿದ್ದು, ಶಿಕ್ಷಣದ ಜೊತೆಗೆ ಉತ್ತಮ ಮೌಲ್ಯಗಳು, ಶಿಸ್ತು, ಆತ್ಮವಿಶ್ವಾಸ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು. ಭವಿಷ್ಯದ ಸವಾಲುಗಳನ್ನು ಎದುರಿಸಲು ಜ್ಞಾನ ಮತ್ತು ಕೌಶಲ್ಯಗಳೊಂದಿಗೆ ಸಜ್ಜಾಗುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ವ್ಹಾಯಿಸ್ ಚೇರಮನ್ನರಾದ ಶ್ರೀ ಅರುಣ ಎ. ಬಿಜ್ಜಳ ಅವರು ಸಾಂದರ್ಭಿಕವಾಗಿ ಮಾತನಾಡಿ, ವಿದ್ಯಾರ್ಥಿ ಒಕ್ಕೂಟವು ವಿದ್ಯಾರ್ಥಿಗಳ ಪ್ರತಿಭೆ ಹಾಗೂ ನಾಯಕತ್ವವನ್ನು ಹೊರತರುವ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪೂಜ್ಯ ಶ್ರೀ ಮ.ನಿ.ಪ್ರ. ಡಾ. ಗುರುಮಹಾಂತ ಸ್ವಾಮಿಗಳು ಆಶೀರ್ವಚನ ನೀಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಸಂಸ್ಕಾರ, ಮಾನವೀಯತೆ ಹಾಗೂ ಸಾಮಾಜಿಕ ಕಳಕಳಿಯನ್ನು ಬೆಳೆಸಿಕೊಳ್ಳಬೇಕು ಎಂದು ಹಿತನುಡಿದರು. ವಿದ್ಯಾರ್ಥಿ ಜೀವನವು ಭವಿಷ್ಯ ರೂಪಿಸಿಕೊಳ್ಳುವ ಅತ್ಯಂತ ಮಹತ್ವದ ಘಟ್ಟವಾಗಿದ್ದು, ಈ ಅವಧಿಯನ್ನು ಸದುಪಯೋಗಪಡಿಸಿಕೊಂಡು ಉನ್ನತ ಗುರಿಗಳನ್ನು ಸಾಧಿಸುವಂತೆ ಆಶೀರ್ವದಿಸಿದರು.
ಪ್ರಾರಂಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಬಿ. ಬಿ. ಸುಗ್ಗಮದ ಅವರು ಪ್ರಾಸ್ತಾವಿಕ ನುಡಿಗಳ ಮೂಲಕ ಕಾರ್ಯಕ್ರಮದ ಉದ್ದೇಶ ಹಾಗೂ ವಿದ್ಯಾರ್ಥಿ ಒಕ್ಕೂಟದ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸಂಘಟನಾ ಸಾಮರ್ಥ್ಯ, ಜವಾಬ್ದಾರಿಯುತ ಮನೋಭಾವ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವಲ್ಲಿ ವಿದ್ಯಾರ್ಥಿ ಒಕ್ಕೂಟದ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಶ್ರೀ ಸಿ. ಪಿ. ಸಾಲಿಮಠ, ಉಪಾಧ್ಯಕ್ಷರು ಹಾಗೂ ಎಸ್.ವಿ.ಎಂ. ಡಿಗ್ರಿ ಕಾಲೇಜಿನ ಚೇರಮನ್ನರಾದ ಶ್ರೀ ಆರ್. ಎಸ್. ಹೂಲಿ, ಎಸ್.ವಿ.ಎಂ. ಬಿ.ಬಿ.ಎ. ಹಾಗೂ ಎ.ಆರ್.ಜಿ. ಬಿ.ಸಿ.ಎ. ಪದವಿ ಮಹಾವಿದ್ಯಾಲಯದ ಆಡಳಿತ ಮಂಡಳಿ ಚೇರಮನ್ನರಾದ ಶ್ರೀ ಶರಣಪ್ಪ ಚ. ಅಕ್ಕಿ, ವಿದ್ಯಾರ್ಥಿ ಒಕ್ಕೂಟದ ಕಾರ್ಯಧ್ಯಕ್ಷರಾದ ಶ್ರೀಮತಿ ಎ. ಎಸ್. ಕೊಡಪ್ಲೆಪ್ಪನವರ, ಪ್ರಧಾನ ಕಾರ್ಯದರ್ಶಿಗಳಾದ ಕು. ಸಂಪದಾ ಮುಳಗುಂದ ಹಾಗೂ ಕು. ಪವಿತ್ರಾ ನಾಯಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಮಾರಂಭವು ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ, ಆತ್ಮವಿಶ್ವಾಸ ಮತ್ತು ನಾಯಕತ್ವದ ಮನೋಭಾವವನ್ನು ಮೂಡಿಸುವ ಮೂಲಕ ಯಶಸ್ವಿಯಾಗಿ ನೆರವೇರಿತು. ೨೦೨೬-೨೭ನೇ ಸಾಲಿನಲ್ಲಿ ವಿದ್ಯಾರ್ಥಿ ಒಕ್ಕೂಟವು ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಹಾಗೂ ವಿವಿಧ ಪಠ್ಯೇತರ ಚಟುವಟಿಕೆಗಳ ಮೂಲಕ ವಿದ್ಯಾರ್ಥಿನಿಯರ ಸರ್ವತೋಮುಖ ಅಭಿವೃದ್ಧಿಗೆ ಪರಿಣಾಮಕಾರಿ ವೇದಿಕೆಯಾಗುವ ವಿಶ್ವಾಸ ವ್ಯಕ್ತವಾಯಿತು.

Download