ಮನರಂಜನ ವಾರದ ಉದ್ಘಾಟನೆ: ಹಸಿರು ದಿನದ ಅಂಗವಾಗಿ ಒಲೆರಹಿತ ಅಡುಗೆ ಸ್ಪರ್ಧೆ 07-04-2026



ಇಳಕಲ್: ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಎಸ್‌ವಿಎಂ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಮನರಂಜನ ವಾರದ ಅಂಗವಾಗಿ ಮೊದಲನೆಯ ದಿನವನ್ನು ಹಸಿರು ದಿನ ಎಂದು ಉತ್ಸಾಹಭರಿತವಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮವನ್ನು ಸಸಿಯನ್ನು ನೆಡುವ ಮೂಲಕ ಉದ್ಘಾಟಿಸಲಾಯಿತು.
ಈ ದಿನದ ಪ್ರಮುಖ ಆಕರ್ಷಣೆಯಾಗಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಹಸಿರು ಸಮವಸ್ತ್ರವನ್ನು ಧರಿಸಿಕೊಂಡು ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರಿದರು. ವಿದ್ಯಾರ್ಥಿಗಳು ಒಟ್ಟು 39 ತಂಡಗಳಾಗಿ ವಿಭಜನೆಗೊಂಡು ಒಲೆರಹಿತ ಅಡುಗೆ ತಯಾರಿಸುವ ಸ್ಪರ್ಧೆಯಲ್ಲಿ ಭಾಗವಹಿಸಿದರು. ಈ ಚಟುವಟಿಕೆ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಮತ್ತು ಪರಿಸರ ಜಾಗೃತಿ ಮೂಡಿಸುವ ಉದ್ದೇಶ ಹೊಂದಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಚೇರ್ಮನ್‌ರಾದ ಶ್ರೀ ಬಿ.ವಿ. ಮರಟ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಶ್ರೀ ಬಿ.ಬಿ. ಸುಗ್ಗಮದ, IQAC ಸಂಯೋಜಕರಾದ ಶ್ರೀ ಪಿ.ಆರ್. ಪಾಟೀಲ, ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷರಾದ ಶ್ರೀಮತಿ ಎ.ಸಿ. ದಟ್ಟಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಕುಮಾರಿ ಸುಮೇರ ಮತ್ತು ವಿದ್ಯಾ ಹೊಸೂರ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಕುಮಾರಿ ಪ್ರತಿಭಾ ಮರೋಳ ಪ್ರಾರ್ಥನೆಯನ್ನು ನೆರವೇರಿಸಿದರು. ನಂತರ ಪ್ರೊಫೆಸರ್ ಟಿ.ಎಂ. ಕುಲಕರ್ಣಿ ಅವರು ಕಾರ್ಯಕ್ರಮವನ್ನು ಸಮರ್ಥವಾಗಿ ನಿರೂಪಿಸಿ ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಚಾರ್ಯರಾದ ಶ್ರೀ ಬಿ.ಬಿ. ಸುಗ್ಗಮದ ಅವರು, ಪಟ್ಟೇತರ ಚಟುವಟಿಕೆಗಳ ಅಂಗವಾಗಿ ಒಂದು ವಾರದವರೆಗೆ ಮನರಂಜನ ವಾರವನ್ನು ಆಚರಿಸುವ ಮೂಲಕ ವಿದ್ಯಾರ್ಥಿಗಳನ್ನು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುವ ಉದ್ದೇಶವಿದೆ ಎಂದು ತಿಳಿಸಿದರು. ಮೊದಲನೆಯ ದಿನವನ್ನು ಹಸಿರು ದಿನವಾಗಿ ಆಚರಿಸುವ ಮೂಲಕ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಇಂದಿನ ಕಾಲದಲ್ಲಿ ಮೂಲಭೂತ ಸಂಪನ್ಮೂಲಗಳನ್ನು ಯಥೇಚ್ಛವಾಗಿ ಬಳಸುವುದರಿಂದ ವಿದ್ಯುತ್, ಇಂಧನ ಮತ್ತು ಪರಿಸರ ಹಾನಿಯಾಗುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ, ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ಅಗತ್ಯವೆಂದು ಅವರು ಅಭಿಪ್ರಾಯಪಟ್ಟರು.
ಒಟ್ಟಿನಲ್ಲಿ, ಮನರಂಜನ ವಾರದ ಮೊದಲ ದಿನ ಹಸಿರು ದಿನವಾಗಿ ಅರ್ಥಪೂರ್ಣವಾಗಿ ಆಚರಿಸಲ್ಪಟ್ಟು, ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೀತಿ ಮತ್ತು ಸಾಮಾಜಿಕ ಜವಾಬ್ದಾರಿತನವನ್ನು ಬೆಳೆಸುವಲ್ಲಿ ಯಶಸ್ವಿಯಾಯಿತು.
Download
